ಎಸ್ಕೋಲ್ಟ್‌ಜಿ಼ಯ: ಪಪಾವರೇಸಿ ಜಾತಿಯ, ಬಹು ಸುಲಭವಾಗಿ ಬೆಳೆಯುವ ವಾರ್ಷಿಕ ಹೂಗಿಡ. 1'-1 1/2' ಎತ್ತರ ಬೆಳೆಯುತ್ತದೆ. ಮಡಿಗಳಲ್ಲಿ ಕುಂಡಗಳಲ್ಲಿ ಬೆಳೆಯುತ್ತಾರೆ. ಎಲೆಗಳ ಮೈ ಬಹಳ ಒಡಕಾಗಿರುತ್ತದೆ. 4"-6" ಸುತ್ತಳತೆಯುಳ್ಳ ತಟ್ಟೆಯ ಆಕಾರದ ಹೂಗಳು ಬೆಳಗಿನಲ್ಲಿ ಮಾತ್ರಅರಳಿ ದೀರ್ಘಕಾಲ ಇರುತ್ತವೆ. ವ್ಯವಸಾಯಕ್ಕೆ, ಹಗುರವಾದ ಮರಳು ಮಿಶ್ರಿತ ಮಣ್ಣು ಬೇಕು. ಬೀಜಗಳನ್ನು ನೇರವಾಗಿ ಬಿತ್ತನೆ ಮಾಡಿ 8"-10" ಅಂತರಗಳಿಗೊಂದು ಸಸಿಯನ್ನು ಬಿಟ್ಟು ಉಳಿದವನ್ನು ಕಿತ್ತು ಹಾಕಬೇಕು. ನಾಲ್ಕು ತಿಂಗಳಲ್ಲಿ ಹೂ ಬರುತ್ತದೆ.  ಚಳಿಗಾಲದಲ್ಲಿ, ವರ್ಷಕ್ಕೊಮ್ಮೆ ಹೂ ಬಿಡುತ್ತದೆ.

ಒಂದು ಪ್ರಭೇದವಾದ ಕ್ಯಾಲಿಪೋರ್ನಿಯನ್ ಪಾಪಿ (ಎಸ್ಕೋಲ್ಟ್‌ಜಿಯ ಕ್ಯಾಲಿಪೋರ್ನಿಕ) ಉತ್ತರ ಅಮೆರಿಕದಲ್ಲಿ ಹೇರಳವಾಗಿ, ತಾನೇ ತಾನಾಗಿ ಬೆಳೆಯುತ್ತದೆ. ಕಸಿ ಗಿಡದ ಹೂಗಳಿಂದ ಸುಗಂಧ ಸಾರವನ್ನು ತೆಗೆಯುತ್ತಾರೆ. ಕ್ಯಾಲಿಪೋರ್ನಿಯನ್ ಪಾಪಿ ಎಂಬ ಸುಗಂಧ ಬಹು ಜನಪ್ರಿಯವಾಗಿದೆ.	(ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ